Pages

18 July 2011

ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು - ೩೩

ಸೂರ್ಯ ರಾಶಿಯಿಂದ ರಾಶಿಗೆ ಚಲಿಸಿದಂತೆ ಕಾಣುವುದೇಕೆ?  

ಸೂರ್ಯನನ್ನು ಭೂಮಿ ಪರಿಭ್ರಮಿಸುತ್ತಿದ್ದರೂ ಜ್ಯೋತಿಷಿಗಳು ಜನಪ್ರಿಯಗೊಳಿಸಿರುವ ೧೨ ರಾಶಿಗಳು ಇರುವ ರಾಶಿಚಕ್ರದಲ್ಲಿ (ಇದನ್ನು ಜ್ಯೋತಿಷ್ಚಕ್ರ ಅನ್ನುವುದು ಉತ್ತಮ ಎಂಬುದು ನನ್ನ ಖಾಸಗಿ ಅಭಿಪ್ರಾಯ) ರಾಶಿಯಿಂದ ರಾಶಿಗೆ ಚಲಿಸುತ್ತಾ ೧೨ ತಿಂಗಳುಗಳಲ್ಲಿ ಭೂಮಿಗೆ ಒಂದು ಸುತ್ತು ಸೂರ್ಯ ಬರುತ್ತಿರುವಂತೆ ಭಾಸವಾಗುವುದು ಏಕೆ? ತಿಳಿಯಲು ಹೀಗೆ ಮಾಡಿ ನೋಡಿ

ಸುಮಾರು ೧೦ ಸೆಂಮೀ ಅಗಲ ಹಾಗೂ ೧೨೨ ಸೆಂಮಿ ಉದ್ದದ ಪಟ್ಟಿಯೊಂದನ್ನು ದಪ್ಪನೆಯ ಕಾಗದದಿಂದ ತಯಾರಿಸಿ. ೧೨೦ ಸೆಂಮೀ ಉದ್ದದ ಭಾಗವನ್ನು ತಲಾ ೧೦ ಸೆಂಮೀನ ೧೨ ಸಮ ಭಾಗಗಳಾಗಿ ವಿಭಜಿಸಿ. ಪ್ರತೀ ವಿಭಾಗದಲ್ಲಿ ಮೇಷ ರಾಶಿಯಿಂದ ಾರಂಭಿಸಿ ಮೀನದ ತನಕ ೧೨ ರಾಶಿಗಳ ಚಿತ್ರಗಳನ್ನು (ಈ ಲೇಖನದ ಅಂತ್ಯದಲ್ಲಿ ಕೊಟ್ಟಿದೆ) ಬಿಡಿಸಿ. ರಾಶಿಗಳ ಚಿತ್ರಗಳು ಒಳಮೈನಲ್ಲಿ ಇರುವಂತೆ ಪಟ್ಟಿಯನ್ನು ಉಂಗುರದ ಆಕೃತಿ ಆಗುವಂತೆ ಮಾಡಿ ಉಳಿದಿರುವ ೨ ಸೆಂಮೀ ಉಪಯೋಗಿಸಿಕೊಂಡು ಅಂಟಿಸಿ. ಇದೇ ನಿಮ್ಮ ಪ್ರಯೋಗಕ್ಕೆ ಬೇಕಾದ ರಾಶಿಚಕ್ರ. ರಾಶಿಚಕ್ರವನ್ನು ಮೇಜಿನ ಮೇಲಿಡಿ. ಸೂರ್ಯನ ಪ್ರತೀಕವಾಗಿ ಉರಿಯುತ್ತಿರುವ ಮೋಂಬತ್ತಿ ಅಥವ ಇನ್ನಾವುದೇ ವಸ್ತುವನ್ನು ಇಡಿ. ಉಂಗುರಕ್ಕೆ ಪ್ರದಕ್ಷಿಣೆ ಹಾಕುತ್ತಾ ನಿಮ್ಮ ಕಣ್ಣಿನ ನೇರದಲ್ಲಿ ಸೂರ್ಯನ ಹಿಂದಿರುವ ರಾಶಿಗಳನ್ನು ಗಮನಿಸಿ. ಬದಲಾಗುತ್ತಿರುವ ನಿಮ್ಮ ಸ್ಥಾನಕ್ಕೆ ಅನುಗುಣವಾಗಿ ಸೂರ್ಯನ ಹಿಂದೆ ಇರುವ ರಾಶಿಗಳೂ ಬದಲಾಗುತ್ತವಲ್ಲವೇ?



ವಿಶ್ವದ ಆಕಾಶಕಾಯಗಳ ನಡುವಣ ದೂರಗಳು ಅನೂಹ್ಯ. ಭೂಮಿಯಲ್ಲಿ ನಮ್ಮ ಸುತ್ತಣ ಅಚರಗಳು ಸದಾ ನಮ್ಮೊಂದಿಗೇ ಇರುವುದರಿಂದಲೂ ಪರಿಭ್ರಮಣೆಯಲ್ಲಿರುವ ಭೂಮಿಯಲ್ಲಿಯೇ ನಾವು ಹುಟ್ಟಿ ಬೆಳೆಯುತ್ತಿರುವುದರಿಂದಲೂ ಸೂರ್ಯನ ಹಿನ್ನೆಲೆಯಲ್ಲಿ ಇರುವ ದೃಶ್ಯ ಬದಲಾಗುತ್ತಿರುವುದರಿಂದಲೂ ನಮ್ಮ ಭೂಮಿ ಸೂರ್ಯನನ್ನು ಪರಿಭ್ರಮಿಸುತ್ತಿರುವುದು ನಮ್ಮ ಅರಿವಿಗೆ ಬರುವುದಿಲ್ಲ. ಹೀಗಿರುವಾಗ ಸೂರ್ಯನ ಹಿಂದಿರುವ ರಾಶಿಗಳು ಬದಲಾಗುತ್ತಿರುವುದನ್ನು ಗಮನಿಸಿ ಸೂರ್ಯ ನಮ್ಮನ್ನು ಪರಿಭ್ರಮಿಸುತ್ತಿದೆ ಎಂದು ನಮ್ಮ ಮಿದುಳು ತಪ್ಪಾಗಿ ಅರ್ಥೈಸುತ್ತದೆ.

No comments: