Pages

19 July 2011

ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು - ೩೪

ತಾರಾಪುಂಜಗಳು ಅಥವ ರಾಶಿಗಳು

ಆಗಸದಲ್ಲಿ ಸಾಪೇಕ್ಷವಾಗಿ ಆಸುಪಾಸಿನಲ್ಲಿ ಇರುವ ಕೆಲವು ತಾರೆಗಳು ಮನಃಪಟಲದಲ್ಲಿ ವಿಶಿಷ್ಟ ಆಕೃತಿಗಳನ್ನು ಮೂಡಿಸುವುದರ ಮುಖೇನ ನಮ್ಮ ಗಮನ ಸೆಳೆಯುತ್ತವೆ. ವೀಕ್ಷಕನ ಮನಸ್ಸಿನಲ್ಲಿ ನಿರ್ದಿಷ್ಟ ಚಿತ್ರ ಬಿಂಬಿಸುವ ಇಂಥ ತಾರಾಸಮೂಹವನ್ನು, ಅರ್ಥಾತ್ ಪುಂಜವನ್ನು ತಾರಾಪುಂಜ ಅಥವ ತಾರಾ ರಾಶಿ ಅಥವ ರಾಶಿ (ಕಾನ್ಸ್ಟಲೇಷನ್) ಅನ್ನುವುದು ವಾಡಿಕೆ. ಎಲ್ಲ ಸಂಸ್ಕೃತಿಗಳಲ್ಲಿ ಪುರಾತನರು ಇಂಥ ಅನೇಕ ಪುಂಜಗಳನ್ನು ಗುರುತಿಸಿ ಅವು ಅವರ ಮನಸ್ಸಿನಲ್ಲಿ ಮೂಡಿಸಿದ ಬಿಂಬಗಳ ಹೆಸರನ್ನೇ ಇಟ್ಟರು. ಗಮನಿಸಿ: ವಾಸ್ತವವಾಗಿ ಆಕಾಶದಲ್ಲಿ ಯಾವ ರೇಖಾಚಿತ್ರಗಳೂ ಇಲ್ಲ. ಅಲ್ಲಿ ಇರುವುದು ಕೇವಲ ಬಿಡಿಬಿಡಿ ತಾರೆಗಳು. ನಾವು ಅವುಗಳಲ್ಲಿ ಆಸುಪಾಸಿನಲ್ಲಿ ಇರುವ ಕೆಲವನ್ನು ಕಾಲ್ಪನಿಕವಾಗಿ ಜೋಡಿಸಿ ನಮ್ಮ ಸಂಸ್ಕೃತಿಗೆ ಹೊಂದಾಣಿಕೆ ಆಗುವಂಥ ಚಿತ್ರಗಳನ್ನು ಕಲ್ಪಿಸಿಕೊಳ್ಳುತ್ತೇವೆ.

ಈ ವಿವರಣೆಯನ್ನು ಮೂರ್ತೀಕರಿಸಲೋಸುಗ ಈ ಚಟುವಟಿಕೆ ಮಾಡಿನೋಡಿ.

ಒಂದು ಆಯಾಕಾರದ ರಟ್ಟಿನ ಡಬ್ಬಿಯ ಚಿಕ್ಕ ಮೇಲ್ಮೈನ ಅಳತೆಯಷ್ಟೇ ಅಳತೆಯ ಕಪ್ಪು ಬಣ್ಣದ ಅಪಾರಕ ಕಾರ್ಡ್ ಹಾಳೆಯ ಮೇಲೆ ಸಿಂಹ ರಾಶಿಯನ್ನು ಪ್ರತಿನಿಧಿಸುವ ಚಿತ್ರ ಬರೆಯಿರಿ. ತಾರೆಗಳನ್ನು ಪ್ರತಿನಿಧಿಸುವ ಬಿಂದುಗಳಲ್ಲಿ ಸೂಜಿಯಿಂದ ಯುಕ್ತ ಗಾತ್ರದ ರಂಧ್ರಗಳನ್ನು ಮಾಡಿ. ಡಬ್ಬಿಯ ಚಿಕ್ಕ ಮೇಲ್ಮೈ ಒಂದನ್ನು ಕತ್ತರಿಸಿ ತೆಗೆದು ಆ ಸ್ಥಳದಲ್ಲಿ ನೀವು ತಯಾರಿಸಿದ ಚಿತ್ರವನ್ನು ಜೋಡಿಸಿ. ಅದರ ವಿರುದ್ಧ ಪಾರ್ಶ್ವದ ಮೇಲ್ಮೈನಲ್ಲಿ ಒಂದು ಪುಟ್ಟ ರಂಧ್ರ ಮಾಡಿ. ಚಿತ್ರ ಇರುವ ಮೇಲ್ಮೈಯನ್ನು ಬೆಳಕಿಗೆ ಎದುರಾಗಿ ಹಿಡಿದು ರಂಧ್ರದ ಮೂಲಕ ನೋಡಿ. ಆಗಸದಲ್ಲಿ ನಿಜವಾಗಿ ಸಿಂಹರಾಶಿಯ ತಾರಗಳು ಹೇಗೆ ಕಾಣಿಸುತ್ತವೆಯೋ ಅದೇ ರೀತಿ ಬೆಳಕಿನ ಚುಕ್ಕಿಗಳು ಕಾಣಿಸುತ್ತವೆ. (ಇದೇ ರೀತಿ ಯಾವುದೇ ರಾಶಿಯನ್ನು ಪ್ರತಿನಿಧಿಸುವ ಕಾರ್ಡ್ ಚಿತ್ರ ತಯಾರಿಸಿ ನೋಡಬಹುದು. ನೋಡಿ:ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು – ೩೩)

ಈಗ ಇದೇ ಪುಂಜದ ಮೂರು ಆಯಾಮಗಳ ಮಾದರಿಯನ್ನು ತಯಾರಿಸಿ ದೃಗ್ಗೋಚರ ಪುಂಜಕ್ಕೂ ಕಲ್ಪನೆಗೂ ವಾಸ್ವಿಕತೆಗೂ ಇರುವ ವ್ಯತ್ಯಾಸ ತಿಳಿಯಿರಿ. ಈ ಮಾದರಿ ತಯಾರಿಸ ಬೇಕಾದ ವಿಧಾನ ಇಂತಿದೆ:

ಜೇಡಿಮಣ್ಣು ಅಥವ ತತ್ಸಮನಾದ ಪದಾರ್ಥದಿಂದ ಕೋಷ್ಟಕದಲ್ಲಿ ಸೂಚಿಸಿದ ವ್ಯಾಸಗಳುಳ್ಳ ಚೆಂಡುಗಳನ್ನು ತಯಾರಿಸಿ. ಇವು ಸಿಂಹ ನಕ್ಷತ್ರ ಪುಂಜದ ಪ್ರಧಾನ ತಾರೆಗಳನ್ನು ಪ್ರತಿನಿಧಿಸುತ್ತವೆ. ತಾರೆಗಳ ಹೆಸರುಗಳ ಎದುರು ಸೂಚಿಸಿರುವ ಎತ್ತರಕ್ಕಿಂತ ೧ ಸೆಂಮೀ ಹೆಚ್ಚು ಉದ್ದದ ಸಪುರವಾದ ಗಟ್ಟಿಯಾದ ಕಡ್ಡಿಗಳನ್ನು ತಯಾರಿಸಿ. ಸಂಬಂಧಿಸಿದ ಪ್ರತಿಕೃತಿಗಳನ್ನು ಆಯಾಯಾ ಕಡ್ಡಿಗಳಿಗೆ ಚುಚ್ಚಿ. ೪೦೦ x ೫೦೦ ಮಿಮೀ ಅಳತೆಯ ಕಪ್ಪು ಹಾಳೆಯ ಮೇಲೆ ೧೦ ಮಿಮೀ ಚಚ್ಚೌಕಗಳ ಜಾಲ ರಚಿಸಿ. ಈ ಅಳತೆಯ ಗ್ರಾಫ್ ಹಾಳೆ ದೊರೆತರೆ ಈ ಶ್ರಮ ತಪ್ಪುತ್ತದೆ. ಈ ಹಾಳೆಯನ್ನು ಯುಕ್ತ ಅಳತೆಯ ತರ್ಮೋಕೋಲ್ ಹಾಳೆಗೆ ಅಂಟಿಸಿ. ಇದರ ಎಡಮೂಲೆಯನ್ನು ಮೂಲಬಿಂದು ಎಂದು ಪರಿಗಣಿಸಿ. ಮೂಲಬಿಂದುವಿನಿಂದ ಎಷ್ಟು ದೂರ x ಅಕ್ಷದಗುಂಟ ಕ್ರಮಿಸಿ ತದನಂತರ ಎಷ್ಟು ದೂರ y ಅಕ್ಷದಗುಂಟ ಕ್ರಮಿಸಿ ತಾರೆಯ ಸ್ಥಾನ ಗುರುತಿಸಬೇಕು ಎಂಬ ಮಾಹಿತಿಯನ್ನು ಕೋಷ್ಟಕದಲ್ಲಿ ಕೊಟ್ಟಿದೆ. ಈ ಮಾಹಿತಿಯನ್ನು ಕರಾರುವಾಕ್ಕಾಗಿ ಉಪಯೋಗಿಸಿ ಪ್ರತೀ ತಾರೆಯ ಸ್ಥಾನ ಗುರುತಿಸಿ ಸಂಬಂಧಿತ ತಾರಾಯುತ ಕಡ್ಡಿಯನ್ನು ಹಾಳೆಗೆ ಚುಚ್ಚಿ ಲಂಬವಾಗಿ ನಿಲ್ಲಿಸಿ. ಹಾಳೆಯ ಮೇಲೆ ತಾರೆಯ ಪ್ರತಿಕೃತಿಯ ತನಕ ಗೋಚರಿಸುವ ಕಡ್ಡಿಯ ಉದ್ದ ಕೋಷ್ಟಕದಲ್ಲಿ ಸೂಚಿಸಿದಷ್ಟು ಇರಬೇಕು. ಹೆಚ್ಚುವರಿಯಾಗಿ ಇರುವ ೧ ಸೆಂಮೀ ಅನ್ನು ಚೆಂಡು ಚುಚ್ಚಲು ಮತ್ತು ತರ್ಮೋಕೋಲ್ ಹಾಳೆಗೆ ಚುಚ್ಚಲು ಉಪಯೋಗಿಸಬೇಕು. ಸೂಚಿಸಿದ ಅಳತೆಗಳನ್ನು ಕರಾರುವಾಕ್ಕಾಗಿ ಅನುಸರಿಸಿದರೆ ಮಾತ್ರ ವಾಸ್ತವತೆಯನ್ನು ಸರಿಸುಮಾರಾಗಿ ಬಿಂಬಿಸುವ ಮಾದರಿ ಸಿದ್ಧವಾಗುತ್ತದೆ ಎಂಬುದನ್ನು ಮರೆಯದಿರಿ. ಸಿದ್ಧವಾದ ಮಾದರಿಯನ್ನು ಮೇಜಿನ ಮೇಲಿಟ್ಟು ಬೇರೆಬೇರೆ ಕೋನಗಳಿಂದ ವೀಕ್ಷಿಸಿ. ಯಾವ ಕೋನದಿಂದ ನೋಡಿದರೆ ಮೊದಲು ತಯಾರಿಸಿದ ಚಿತ್ರದಂತೆ ಈ ಪುಂಜ ಗೋಚರಿಸುತ್ತದೆ ಎಂಬುದನ್ನು ನೀವೇ ಪತ್ತೆಹಚ್ಚಿ.

ಪುಂಜವನ್ನು ಪ್ರತಿನಿಧಿಸುವ ತಾರೆಗಳು ಒಂದೇ ಸಮತಲದಲ್ಲಿ ಇಲ್ಲ ಎಂಬುದನ್ನೂ ಭೂಮಿಯಿಂದ ಸಮದೂರಗಳಲ್ಲಿ ಇಲ್ಲ (ಆದ್ದರಿಂದ ಏಕಕಾಲದಲ್ಲಿ ಅವುಗಳಿಂದ ಹೊಮ್ಮುವ ಯಾವುದೇ ಕಿರಣ ನಮ್ಮನ್ನು ಏಕಕಾಲದಲ್ಲಿ ತಲಪುವುದಿಲ್ಲ) ಎಂಬುದನ್ನೂ   ಸಮಗಾತ್ರದವು ಅಲ್ಲ ಎಂಬುದನ್ನೂ ಗಮನಿಸಿ.

ಪುಂಜ ಮತ್ತು ರಾಶಿಯ ಪರಿಕಲ್ಪನೆಗಳು ಮಾನವನ ಕಲ್ಪನೆಯ ಶಿಶುಗಳು ಎಂಬುದು ತಿಳಿಯಿತಲ್ಲವೇ? ವಾಸ್ತವ ಇಂತಿರುವಾಗ ಅವು ನಮ್ಮ ಜೀವನವನ್ನು ನಿರ್ದೇಶಿಸುವುದು ಹೇಗೆ ಸಾಧ್ಯ? ನೀವೇ ಆಲೋಚಿಸಿ.

ಸಿಂಹ ತಾರಾ ಪುಂಜದ ೩ ಆಯಾಮದ ಮಾದರಿ ತಯಾರಿಸಲು ಮಾರ್ಗದರ್ಶೀ ಕೋಷ್ಟಕ:


ಅಳತೆಗಳು ಮಿಮೀ ಗಳಲ್ಲಿ

ತಾರೆಯ ಹೆಸರುತಯಾರಿಸಬೇಕಾದ ಚೆಂಡಿನ ವ್ಯಾಸಚುಚ್ಚಿದ ಕಡ್ಡಿಯ ಗೋಚರ ಭಾಗಮೂಲಬಿಂದುವಿನಿಂದ ದೂರ
x ಅಕ್ಷದಲ್ಲಿy ಅಕ್ಷದಲ್ಲಿ
ಡೆನೆಬೋಲ (ಉತ್ತರಾ)೧೦೧೦೫೦೦೧೦
ಜೋಸ್ಮ (ಪುಬ್ಬಾ)೧೦೧೫೦೮೫೧೩
ಅಲ್ ಗೀಬ೧೪೧೬೫೨೫೫೨೫
ಅಧಫೆರ೧೨೨೨೫೨೭೦೩೦
ಮು೧೪೨೪೦೩೪೫೪೫
ಎಪ್ಸಿಲಾನ್೧೬೨೨೫೩೭೫೭೭
ಈಟ೨೦೧೩೫೩೦೦೪೫೦
ರೆಗ್ಯುಲಸ್ (ಮಖಾ)೧೫೭೫೩೦೦೨೧
ಕಾಕ್ಸ೧೦೯೬೮೫೧೯

No comments: